ನಿದರ್ಶನಗಳು -
	ಹೇಳತಕ್ಕ ವಿಷಯಗಳು ಹೆಚ್ಚು ಸ್ಪಷ್ಟವೂ, ವಾಸ್ತವವೂ, ಪರಿಣಾಮಕಾರಿಯೂ ಆಗಿರುವಂತೆ ಮಾಡಲು ಬಳಸುವ ಸಾಧನಗಳು. ಇವನ್ನು ದೃಷ್ಟಾಂತಗಳೆಂದೂ ಕರೆಯುವರು. ಇವು ಉದಾಹರಣೆ, ಕಥೆ, ಉಪಕಥೆ, ಅಭಿನಯ, ನಕ್ಷೆ, ಚಿತ್ರ, ಮಾದರಿ, ನಿಜವಾದ ವಸ್ತು-ಮುಂತಾದವುಗಳ ರೂಪದಲ್ಲಿರಬಹುದು. ಇವು ವಿವರಣೆ ಮತ್ತು ವಿಷಯ ಜ್ಞಾನ ಹೆಚ್ಚು ಸಮಂಜಸವಾಗುವಂತೆ ಮಾಡಿ ಹೇಳತಕ್ಕ ವಿಷಯಕ್ಕೆ ಜೀವಕಳೆ ತುಂಬಲು ನೆರವಾಗುತ್ತದೆ. ಆದ್ದರಿಂದಲೇ ಧರ್ಮ ಭೋದಕರೂ ತತ್ತ್ವಪ್ರಚಾರಕರೂ, ರಾಜಕೀಯ ಧುರೀಣರೂ, ಅಧ್ಯಾಪಕರೂ ವಿಜಯವನ್ನು ವಿವರಿಸುವಾಗ ಬಗೆಬಗೆಯ ನಿದರ್ಶನಗಳನ್ನು ಬಳಸುವುದು. ಅದರಿಂದ ಪ್ರತಿಪಾದಿಸಬೇಕಾದ ವಿಷಯಕ್ಕೆ ಸಂಬಂಧಿಸಿದ ಅಂಶಗಳ ವಿವರಣೆಯ ಕಾಠಿಣ್ಯವೂ, ಪರಿಯ ಹೀನತೆವೂ ಕಡಿಮೆಯಾಗಿ ಸರಳವೂ, ಪರಿಚಿತವೂ ಸುಲಭಗ್ರಾಹ್ಯವೂ ಆಗುತ್ತದೆ. ಜೊತೆಗೆ ಅದು ಕೇಳುವವರು ವಿಷಯದಲ್ಲಿ ಹೆಚ್ಚು ಆಸಕ್ತಿ ತಳೆಯುವಂತೆ ಮಾಡುತ್ತದೆ.

	ಪಾಠಭೋದನೆಯಲ್ಲಿ ನಿದರ್ಶನಗಳು: ತರಗತಿಯಲ್ಲಿ ಬೋಧಿಸುವ ವಿಷಯವನ್ನು ಮಕ್ಕಳು ಸುಲಭವಾಗಿ ಅರಿತುಕೊಳ್ಳುವಂತೆ ಮಾಡಲು ಬಗೆಬಗೆಯ ಪಾಠೋಪಕರಣಗಳನ್ನು ಬಳಸುವರು. ಅವುಗಳಲ್ಲಿ ನಿದರ್ಶನಗಳು ತುಂಬ ಪರಿಣಾಮಕಾರಿಯೆನಿಸುವ ಪಾಠೋಪಕರಣಗಳು. ಅವು ಹೇಳತಕ್ಕ ವಿಷಯದಲ್ಲಿ ಮಕ್ಕಳ ಆಸಕ್ತಿಯನ್ನು ಕೆರಳಿಸಿ ಅವರ ಕಲ್ಪನಾಶಕ್ತಿಯನ್ನೂ ಪ್ರತಿಭಾಶಕ್ತಿಯನ್ನೂ ಪ್ರಚೋದಿಸುತ್ತವೆ. ಒಂದು ವಿಷಯವನ್ನು ಗ್ರಹಿಸಲು ಯಾವ ನಿದರ್ಶನಗಳು ಹೆಚ್ಚು ಸಹಾಯ ಮಾಡುವುದೊ, ಕಲಿವು ಸುಲಭವಾಗಿ ಸಿದ್ಧಿಸುವುದೊ ಅವು ಆ ಪಾಠಬೋಧನೆಗೆ ಒಳ್ಳೆಯ ನಿದರ್ಶನಗಳು. ಆದರೆ ಎಲ್ಲ ಪಾಠಗಳ ಬೋಧನೆಯಲ್ಲೂ ಒಂದೇ ನಿದರ್ಶನ ಸಹಕಾರಿಯೆನಿಸಲಾರದು. ಆಯಾ ವಿಷಯದ ಸ್ವರೂಪವನ್ನವಲಂಬಿಸಿ ಯುಕ್ತವೆನಿಸುವ ನಿದರ್ಶನಗಳನ್ನು ಬಳಸಬೇಕು. ಹಾಗೆ ಔಚಿತ್ಯವರಿತು ಯುಕ್ತ ನಿದರ್ಶನಗಳನ್ನು ಆರಿಸಿ ಬಳಸಿಕೊಳ್ಳುವುದು ಅಧ್ಯಾಪಕರ ಕೌಶಲ್ಯದ ಒಂದು ಲಕ್ಷಣವೆಂದು ಹೇಳುವುದುಂಟು.

	ಕಿತ್ತಳೆಹಣ್ಣಿನ ಪಾಠಮಾಡುವಾಗ ನಿದರ್ಶನದ ಬಳಕೆಯಿಂದ ಬೋಧನೆ ವಾಸ್ತವಿಕವೂ ವರ್ಣನೆ ಸ್ವಾಭಾವಿಕವೂ ಆಗಿದ್ದರೆ ಕಲಿವು ಸರಾಗವಾಗುತ್ತದೆ; ಮಕ್ಕಳ ವಿಚಾರಶಕ್ತಿಯನ್ನು ಪ್ರಚೋದಿಸಿ ಕಲ್ಪನೆಯನ್ನು ಪೋಷಿಸಲು ನೆರವಾಗುತ್ತದೆ. ಎಂದರೆ, ಆ ಪಾಠಬೋಧನೆಗೆ ಅತ್ಯಂತ ಸೂಕ್ತವಾದ ನಿದರ್ಶನ ಆ ವಸ್ತುವೇ; ಅದಕ್ಕಿಂತ ಸ್ವಲ್ಪ ಕೆಳದರ್ಜೆಯ ನಿದರ್ಶನ ಅದರ ಮಾದರಿ; ಇನ್ನೂ ಕೆಳದರ್ಜೆಯದು ಅದರ ಚಿತ್ರ; ಎಲ್ಲಕ್ಕೂ ಕೆಳದರ್ಜೆಯ ನಿದರ್ಶನ ಬರಿಯ ಮಾತಿನ ವರ್ಣನೆ. ಏಕೆಂದರೆ, ಆಗ ಬೋಧಿಸುವ ವಿಷಯದ ಬಗ್ಗೆ ಸ್ವಲ್ಪವೂ ಮೂರ್ತ ಸ್ವರೂಪ ಅರಿವಾಗದೆ ಎಲ್ಲವನ್ನೂ ಅವರು ಭಾವನೆಗಳ ಮೂಲಕ ಗ್ರಹಿಸಿಕೊಳ್ಳಬೇಕಾಗಿ ಬಂದು, ಕಲಿವು ಕ್ಲಿಷ್ಟವಾಗುವುದರ ಜೊತೆಗೆ ಪರಿಣಾಮಕಾರಿಯೂ ಆಗುವುದಿಲ್ಲ. ಇದಿಷ್ಟರಿಂದ ಕೇವಲ ಭಾಷೆಯ ಮೂಲಕ ನೀಡುವ ನಿದರ್ಶನ ನಿಷ್ಪ್ರಯೋಜಕವೆಂದು ಭಾವಿಸಕೂಡದು. ಬೇರೆ ವಿಷಯವೊಂದರ ಬೋಧನೆಯಲ್ಲಿ ಅಂಥ ನಿದರ್ಶನಗಳೇ ಹೆಚ್ಚು ಪರಿಣಾಮಕಾರಿಯೆನಿಸಬಹುದು. ವಿಜ್ಞಾನ ಪಾಠಮಾಡುವಾಗ ಮಕ್ಕಳು ಪರಿಶೀಲನೆ, ಆಲೋಚನೆ, ಪ್ರತ್ಯಕ್ಷ ಹೋಲಿಕೆ-ಇವುಗಳ ಮೂಲಕ ಜ್ಞಾನಾರ್ಜನೆ ಮಾಡಬೇಕಾಗುವುದರಿಂದ ವಾಸ್ತವ ನಿದರ್ಶನಗಳ ಮೂಲಕ ಪಾಠಬೋಧಿಸಬೇಕಾಗುತ್ತದೆ. ಪ್ರಕೃತಿಪಾಠಮಾಡುವಾಗಲೂ ವಾಸ್ತವ ನಿದರ್ಶನಗಳ ಬಳಕೆ ಅಗತ್ಯವಾಗುತ್ತದೆ. ಭೂಗೋಳ ಪಾಠದಲ್ಲಿ ಒಂದು ಕಣಿವೆಯನ್ನು ವಿವರಿಸುವಾಗ ತರಗತಿಯಲ್ಲಿ ಕಣಿವೆಯನ್ನು ತಂದು ತೋರಿಸಲಾಗದಿದ್ದರೂ ಅನುಕೂಲವಾದಾಗ ಅಲ್ಲಿಗೆ ಪ್ರವಾಸ ಹೋಗಿ ಪ್ರತ್ಯಕ್ಷ ಪರಿಶೀಲನೆಗೆ ಅವಕಾಶ ಕಲ್ಪಿಸಬಹುದು. ಆದರೆ ತರಗತಿಯಲ್ಲಿ ಕಣಿವೆಯ ಮಾದರಿ ಚಿತ್ರ, ನಕ್ಷೆ ಮುಂತಾದುವನ್ನಾದರೂ ಬಳಸುವುದರಿಂದ ವರ್ಣನೆ ತಕ್ಕಮಟ್ಟಿಗಾದರೂ ವಾಸ್ತವವಾಗಿ ಕಲಿವು ಸರಾಗವಾಗುತ್ತದೆ. ಚರಿತ್ರೆಯ ಪಾಠ ಮಾಡುವಾಗ ಗತಕಾಲದ ರಾಜರ, ಯುದ್ಧದ, ಸಂಸ್ಕøತಿಯ, ಘಟನೆಗಳ ಸನ್ನಿವೇಶಗಳನ್ನು ನಿದರ್ಶನವಾಗಿ ಬಳಸುವುದು ಸಾಧ್ಯವಿಲ್ಲ. ಆದ್ದರಿಂದ ಅಂಥ ಸನ್ನಿವೇಶಗಳಿಗೆ ಸಂಬಂಧಿಸಿದ, ನಕ್ಷೆ, ಭೂಪಟ, ಚಿತ್ರ, ವಸ್ತು ಮುಂತಾದವನ್ನು ನಿದರ್ಶನವನ್ನಾಗಿ ಬಳಸಿ ವಿವರಣೆಯನ್ನು ಪೂರೈಸಬೇಕಾಗುತ್ತದೆ. ಆದರೆ ಅವಕಾಶವಾದಾಗ ಸಂಬಂಧಿಸಿದ ಐತಿಹಾಸಿಕ ಸ್ಥಳಗಳಿಗೋ ಐತಿಹಾಸಿಕ ವಸ್ತುಗಳನ್ನಿಟ್ಟಿರುವ ವಸ್ತು ಸಂಗ್ರಹಾಲಯಕ್ಕೊ ಪ್ರವಾಸ ಹೋಗಿ ವಿಷಯವನ್ನು ಸ್ಪಷ್ಟಪಡಿಸಬಹುದು. ಗಣಿತದ ಪಾಠಮಾಡುವಾಗ ಕೆಳಗಿನ ತರಗತಿಗಳಲ್ಲಿ ಮೂರ್ತಸ್ವರೂಪದ ಮಣಿ, ತುಂಡು ಮುಂತಾದವನ್ನು ಬಳಸಬಹುದು. ಆದರೆ ಸಾಹಿತ್ಯದ ಪಾಠಮಾಡುವಾಗ ಕಣಿವೆಯೊಂದನ್ನು ಕುರಿತ ಪದ್ಯವನ್ನೋ ಗದ್ಯವನ್ನೋ ಬೋಧಿಸುವಾಗ ಕಣಿವೆಯ ಚಿತ್ರವಾಗಲಿ ಪ್ರತಿಮೆಯಾಗಲಿ ಉಪಯುಕ್ತವೆನಿಸದ ನಿದರ್ಶನ. ಮಕ್ಕಳು ಭಾಷೆ ಭಾವನೆ, ಕಲ್ಪನೆ, ರಸಾನುಭವ-ಈ ಮುಖವಾದ ಅಭಿವೃದ್ಧಿ ಸಾಧಿಸಬೇಕಾದ್ದರಿಂದ ಅಲ್ಲಿ ಸಾರಸ್ವತ ಅಥವಾ ಭಾಷೆಯ ನಿದರ್ಶನಗಳು ಹೆಚ್ಚು ಉಪಯುಕ್ತವೆನಿಸುತ್ತವೆ. ಉದಾಹರಣೆ, ಕಥೆ, ವಿವರಣೆ, ವರ್ಣನೆ ಮುಂತಾದವುಗಳನ್ನು ನಿದರ್ಶನಗಳನ್ನಾಗಿ ಬಳಸುವುದರಿಂದ ಭಾಷಾಶಕ್ತಿ ಅಭಿವೃದ್ಧಿಯಾಗುವುದರ ಜೊತೆಗೆ ಮಕ್ಕಳ ಕಲ್ಪನಾಶಕ್ತಿಯೂ ರಾಸಾನುಭೂತಿಯೂ ಅಭಿವ್ಯಕ್ತಿ ಶಕ್ತಿಯೂ ವರ್ಧಿಸುತ್ತವೆ.

	ವಯೋಗುಣಕ್ಕೆ ತಕ್ಕ ನಿದರ್ಶನ: ಶಿಶುವಿಹಾರಗಳಲ್ಲಿ ವಿಷಯವನ್ನು ಕೇವಲ ಮಾತಿನಿಂದ ವಿವರಿಸಿದರೆ, ಎಂದರೆ ಶಾಬ್ದಿಕ ನಿದರ್ಶನಗಳನ್ನು ಬಳಸಿದರೆ ಅದರ ವಿವರವನ್ನು ಪುಟ್ಟ ಮಕ್ಕಳು ಕಲ್ಪಿಸಿಕೊಳ್ಳಲಾರವು. ಐದು ಎಂದು ಎಷ್ಟು ಮಾತುಗಳಿಂದ ವಿವರಿಸಿದರೂ ಅದರ ಕಲ್ಪನೆ ಅವರಿಗಾಗುವುದಿಲ್ಲ. ಅದರ ಬದಲು ಮಣ್ಣಿಕಟ್ಟಿನ ಐದು ಮಣಿಗಳನ್ನೊ ಹಸ್ತದ ಐದು ಬೆರಳನ್ನೊ ಇನ್ನಾವುದಾದರೂ ವಸ್ತುಸಮೂಹದಿಂದ ಐದು ವಸ್ತುಗಳನ್ನೊ ಬೇರ್ಪಡಿಸಿ ನಿದರ್ಶನವಾಗಿ ಬಳಸಿದಾಗ ಅದರ ಸ್ವರೂಪವನ್ನು ಗ್ರಹಿಸುವುದು ಸರಾಗವಾಗುತ್ತದೆ. ಹಾಗೂ ಮಕ್ಕಳಿಗೆ ಅನುಭವವಾಗದಿರುವ ಅಪರಿಚಿತ ಭಾವನೆಗಳನ್ನು ಮೂಡಿಸಲು ಮೂರ್ತಸ್ವರೂಪದ ನಿದರ್ಶನ ತೀರ ಅಗತ್ಯವೂ ಉಚಿತವೂ ಹೌದು. ಈ ನೀತಿ ಪ್ರಾಥಮಿಕಶಾಲೆಯಲ್ಲೂ ಮುಂದುವರಿಯಬೇಕು. ಮುಖ್ಯವಾಗಿ ಪ್ರಕೃತಿಪಾಠ, ವಿಜ್ಞಾನ, ಗಣಿತ ಮುಂತಾದ ಪಾಠಗಳಲ್ಲಿದು ತೀರ ಅಗತ್ಯ. ಭಾಷಾಬೋಧನೆಯಲ್ಲೂ ನೂತನ ಪದಗಳ ಅರ್ಥಪರಿಚಯ ಮಾಡಿಕೊಡುವಾಗ ಚಿತ್ರಗಳು ತುಂಬ ನೆರವಿಗೆ ಬರುತ್ತವೆ. ಆದ್ದರಿಂದಲೆ ಮೊದಲ ಪುಸ್ತಕದಲ್ಲಿ ಮಾತೃಭಾಷೆಯಾಗಲಿ ಅನ್ಯಭಾಷೆಯಾಗಲಿ, ಹೊಸಪದ, ಪದಪುಂಜ, ವಾಕ್ಯವಿವರಣೆ, ಕ್ರಿಯಾ ಕಥನ-ಇವುಗಳ ಅರ್ಥ ಗ್ರಹಿಸಲು ನೆರವಾಗುವಂತೆ ಯಥೇಚ್ಛವಾಗಿ ಚಿತ್ರಗಳನ್ನು ಬಳಸುವುದು. ಬೋಧಿಸುವಾಗಲೂ ಚಿತ್ರಪಟಗಳನ್ನು ಬಳಸುವುದು ಅತ್ಯಗತ್ಯ. ಗಣಿತದ ಅಮೂರ್ತ ಲೆಕ್ಕಗಳನ್ನು ಮಾಡುವಾಗ ಮಣಿ, ಬಿಲ್ಲೆ, ಗಜ್ಜುಗ, ಗೋಲಿ, ಬೆರಳು ಮುಂತಾದವನ್ನು ಬಳಸಿಕೊಳ್ಳಬಹುದು. ಸಂಕಲನ, ವ್ಯವಕಲನಗಳಲ್ಲಿ ಗುಣಾಕಾರ, ಭಾಗಾಕಾರ ಇಂಥ ಮೂಲಕೌಶಲ್ಯವನ್ನೊಳಗೊಂಡ ಲೆಕ್ಕಗಳನ್ನು ಮೊದಲ ಬಾರಿಗೆ ಬೋಧಿಸುವಾಗ ವಾಸ್ತವಿಕ ನಿದರ್ಶನಗಳು ಸರಾಗವಾಗಿ ಗ್ರಹಿಸಲು ಸಹಾಯಮಾಡುತ್ತವೆ. ಪ್ರಕೃತಿಪಾಠ, ವಿಜ್ಞಾನ-ಇವುಗಳ ಪಾಠಗಳಲ್ಲೂ ವಾಸ್ತವ ನಿದರ್ಶನ ಉಪಯುಕ್ತವೆನಿಸುತ್ತವೆ. ಅವಿಲ್ಲದಾಗ ಚಿತ್ರಗಳನ್ನಾದರೂ ಬಳಸಬೇಕಾಗುತ್ತದೆ. ಪ್ರಾಥಮಿಕ ಶಾಲೆಯ ಕೊನೆಯ ಹಂತಗಳನ್ನು ಮುಟ್ಟಿದಂತೆ ಮಕ್ಕಳು ನಿದರ್ಶನಗಳಿಲ್ಲದಿದ್ದರೂ ಪದಗಳ ಅರ್ಥವನ್ನು ಗ್ರಹಿಸಲು ವಾಕ್ಯಗಳ ವಿವರಣೆಗಳ ಮೂಲಕ ವಿಷಯವನ್ನು ಅರಿತುಕೊಳ್ಳಲು ಸಾಧ್ಯವಾಗಬೇಕು. ಪ್ರೌಢಶಾಲೆಗಳಲ್ಲಿ ವಾಸ್ತವ ನಿದರ್ಶನಗಳ ಬಳಕೆ ಭಾಷೆ, ಸಾಹಿತ್ಯ, ಇತಿಹಾಸ, ಪೌರನೀತಿ ಮುಂತಾದ ಕೆಲವು ಪಾಠಗಳಲ್ಲಿ ಕಡಿಮೆಯಾಗಬೇಕು. ಅವರಿಗೆ ಭಾಷಾಶಕ್ತಿಯೂ ಪದಸಂಪತ್ತೂ ಭಾವನೆಗಳೂ ಯಥೇಚ್ಛವಾಗಿ ವೃದ್ಧಿಯಾಗಿರುವುದರಿಂದ ಎಂಥ ಕ್ಲಿಷ್ಟ ವಿಷಯಗಳನ್ನಾದರೂ ಉದಾಹರಣೆಗಳಂಥ, ವಿವರಣೆ ಕಥಾನಕಗಳಂಥ ಶಾಬ್ದಿಕ ನಿದರ್ಶನಗಳ ಮೂಲಕ ಗ್ರಹಿಸಿಕೊಳ್ಳುವ ಶಕ್ತಿ ಬಂದಿರುತ್ತದೆ. ವಿಜ್ಞಾನ ಪಾಠಗಳಲ್ಲಿ ಪ್ರತ್ಯಕ್ಷ ಪರೀಕ್ಷೆ, ನಿಯಮನಿರೂಪಣೆಗಾಗಿ ವಸ್ತುಪ್ರಯೋಗ, ಪ್ರತಿಮೆ ಮುಂತಾದ ವಾಸ್ತವ ನಿದರ್ಶನಗಳೆನ್ನೇನೊ ಬಳಸಬೇಕಾಗುತ್ತದೆ. ಉನ್ನತ ಶಿಕ್ಷಣದ ಮಟ್ಟದಲ್ಲೂ ಈ ನೀತಿಯನ್ನು ಅನುಸರಿಸಬೇಕಾಗುತ್ತದೆ. ಅಲ್ಲಿ ಬೋಧಿಸುವ ವಿಷಯಗಳು ತೀರ ಸಂಕೀರ್ಣವೂ ವಿಶಿಷ್ಟರೀತಿಯವೂ ಆಗಿರುವುದರಿಂದ ವಾಸ್ತವಿಕ ನಿದರ್ಶನಗಳನ್ನು ಬಳಸುವುದು ಸಾಧ್ಯವಾಗುವುದಿಲ್ಲ. ವಿಜ್ಞಾನ ಪಾಠದಲ್ಲಿ ಪ್ರಯೋಗಾದಿ ಪರೀಕ್ಷಣಗಳನ್ನು ನಡೆಸಬೇಕಾಗುತ್ತದೆ. ಕೆಲವು ಸಿದ್ಧಾಂತಗಳಿಗೆ ಮಾದರಿಗಳ ಬಳಕೆ (ಉದಾ-ಪರಮಾಣುವಾದ) ಅಗತ್ಯವೆನಿಸುವುದಾದರೂ ಸಾಹಿತ್ಯ, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮುಂತಾದ ವಿಷಯಗಳಲ್ಲಿ ಶಾಬ್ದಿಕ ನಿದರ್ಶನ ಪ್ರಮುಖ ಪಾತ್ರ ವಹಿಸುತ್ತದೆ.

	ನಿದರ್ಶನಗಳ ವರ್ಗೀಕರಣ : ನಿದರ್ಶನಗಳನ್ನು ಸ್ಥೂಲವಾಗಿ ಎರಡು ವರ್ಗಗಳನ್ನಾಗಿ ವಿಂಗಡಿಸುವುದುಂಟು-ವಾಸ್ತವ ನಿದರ್ಶನ ಮತ್ತು ಶಾಬ್ದಿಕ ನಿದರ್ಶನ. ಬೋಧಿಸುವ ವಿಷಯಕ್ಕೆ ಸಂಬಂಧಿಸಿದಂತೆ ವಿಷಯವನ್ನು ಸ್ಪುಟೀಕರಿಸಲು ಬಳಸುವ ಉದಾಹರಣೆ, ಹೋಲಿಕೆ, ಕಥೆ, ವಿವರಣೆ-ಇವೆಲ್ಲ ಶಾಬ್ದಿಕ ನಿದರ್ಶನಗಳೂ. ನಕ್ಷೆ ಚಿತ್ರ, ಮಾದರಿ, ವಸ್ತು -ಇವು ವಾಸ್ತವಿಕ ನಿದರ್ಶನUಳು. ಪ್ರತ್ಯಕ್ಷವಾಗಿ ಪ್ರದರ್ಶಿಸಬಹುದಾದರೂ ವಾಸ್ತವಿಕ ನಿದರ್ಶನಗಳು ಶಾಬ್ದಿಕ ನಿದರ್ಶನಗಳಿಗಿಂತ ಹೆಚ್ಚು ಪರಿಣಾಮಕಾರಿಯೆನಿಸಿದ್ದರೂ ಸಂದರ್ಭಾನುಸಾರ ಅವುಗಳ ಉಪಯುಕ್ತತೆಯ ಪ್ರಮಾಣ ವ್ಯತ್ಯಾಸವಾಗಬಹುದು. ಎಲ್ಲ ಹಂತದ ಶಿಕ್ಷಣದಲ್ಲೂ ಪ್ರತಿಭಾವಂತ ಮಕ್ಕಳು ಶಾಬ್ದಿಕ ನಿದರ್ಶನಗಳಲ್ಲಿ ಆಸಕ್ತಿ ತೋರುವರು. ಮಂದಬುದ್ದಿಯ ಮಕ್ಕಳಾದರೂ ಮೇಲ್ಮಟ್ಟದ ಶಿಕ್ಷಣಸಂಸ್ಥೆಗಳಲ್ಲೂ ವಾಸ್ತವಿಕ ನಿದರ್ಶನಗಳ ಮೂಲಕವೇ ಕಲಿವನ್ನು ಸಾಧಿಸಲು ಆಶಿಸುವರು. ಹಾಗೆಯೆ, ವಿವಿಧ ವಿಷಯ ಬೋಧನೆಯಲ್ಲೂ ವಾಸ್ತವಿಕ ನಿದರ್ಶನಗಳ ಉಪಯುಕ್ತತೆ ಮತ್ತು ಔಚಿತ್ಯ ಹೆಚ್ಚು ಕಡಿಮೆ ಆಗಬಹುದು. ಸಸ್ಯಶಾಸ್ತ್ರದಲ್ಲಿ ಹೂವಿನ ಭಾಗಗಳು ಮತ್ತು ಅವುಗಳ ಕೆಲಸಗಳನ್ನು ಬೋಧಿಸುವಾಗ ಹೂವಿನ ವಾಸ್ತವಿಕ ನಿದರ್ಶನ ತೀರ ಅಗತ್ಯವೂ ಉಪಯುಕ್ತವೂ ಆಗಿದ್ದು ಉಚಿತವೆನಿಸುತ್ತದೆ. ಅದೇ ನಿದರ್ಶನವನ್ನು ನೀತಿಪಾಠದಲ್ಲಿ ಹೂವಿನಂಥ ಹೃದಯ, ಪರಿಶುದ್ಧತೆ ಎಂಬುದರ ಅರ್ಥವನ್ನು ವಿವರಿಸುವಾಗ ಬಳಸಿದರೆ ಬೋಧನೆ ಕೃತಕವಾಗಿ ತೋರುವುದಲ್ಲದೆ ಮಕ್ಕಳ ಮನಸ್ಸು ಆ ನೀತಿಭಾವನೆಯನ್ನು ಬಿಟ್ಟು ಹೂವಿನ ಅಂದಚಂದಗಳಲ್ಲಿ ಲೀನವಾಗಿ ನಿದರ್ಶನ ಉದ್ದೇಶ ಸಾರ್ಥಕವಾಗದೇ ಹೋಗಬಹುದು. ಅಂಥ ಸಂದರ್ಭಧಲ್ಲಿ ಉದಾಹರಣೆ, ಕಥೆ, ವಿವರಣೆ, ಹೋಲಿಕೆ ಮುಂತಾದ ನಿದರ್ಶನಗಳು ಹೆಚ್ಚು ಫಲಕಾರಿಯೆನಿಸುತ್ತದೆ. ಅವು ಅವರ ಕಲ್ಪನಾಶಕ್ತಿಯನ್ನು ಕೆರಳಿಸಿ ಅಮೂರ್ತಭಾವನೆಗಳನ್ನು ಅರ್ಥಮಾಡಿಕೊಂಡು ನೀತಿ ನಿಯಮಗಳ ಅನುಷ್ಠಾನದ ಪ್ರಾಮುಖ್ಯವನ್ನು ಗ್ರಹಿಸಿಕೊಳ್ಳುವಂತೆ ಮಾಡಬಲ್ಲವು. ಯಾವ ಶಾಬ್ದಿಕ ನಿದರ್ಶನಗಳೇ ಆಗಲಿ ಮಕ್ಕಳಿಗೆ ಪರಿಚಿತವಾಗಿರಬೇಕು; ಇಲ್ಲ, ಸುಲಭಗ್ರಾಹ್ಯವಾಗಿಯಾದರೂ ಇರಬೇಕು. ಅಂದು ಮಾತ್ರ ವಿಷಯವನ್ನು ಅರಿತುಕೊಳ್ಳಲು ಅವು ನೆರವಾಗುತ್ತವೆ. ಯಾವ ಸಾರಸ್ವತ ನಿದರ್ಶನಗಳೂ ಎಷ್ಟೇ ಆಕರ್ಷಕವಾಗಿದ್ದರೂ ಬೋಧಿಸುವ ವಿಷಯವನ್ನು ಹಿಂಬದಿಗೆ ತಳ್ಳುವಷ್ಟು ಪ್ರಾಧಾನ್ಯ ಪಡೆದಿರಕೂಡದು. ನಿದರ್ಶನವಾಗಿ ಬಳಸತಕ್ಕ ಕಥೆ, ಉದಾಹರಣೆ, ವಿವರಣೆ ಮುಂತಾದವು ಆದಷ್ಟು ಚಿಕ್ಕವಾಗಿದ್ದು ಕಲಿಯುವ ವಿಷಯದ ಮೇಲೆ ಬೆಳಕು ಚೆಲ್ಲುವಂತಿರಬೇಕು. ಉಪಾಧ್ಯಾಯರು ಅಂಥ ನಿದರ್ಶನಗಳನ್ನು ಪೂರ್ವಭಾವಿಯಾಗಿ ಆಯ್ದು ಸಿದ್ಧಪಡಿಸಿಕೊಂಡು ಸೂಕ್ತ ಸಂದರ್ಭಗಳಲ್ಲಿ ಬಳಸಲು ನಿಯೋಜಿಸಿಕೊಂಡಿದ್ದರೆ ಅವು ತಮ್ಮ ಉದ್ದೇಶವನ್ನು ಪರಿಣಾಮಕಾರಿಯಾಗಿ ಈಡೇರಿಸಬಲ್ಲವು. ಪಾಠಮಾಡುವಾಗ ಮೊದಲಿಂದ ಕೊನೆಯವರೆಗೆ ಒಂದೇ ಬಗೆಯ ಶಾಬ್ದಿಕ ನಿದರ್ಶನಗಳನ್ನು ಬಳಸುತ್ತಿದ್ದರೆ ಮಕ್ಕಳಿಗೆ ಬೇಸರವಾಗಬಹುದು. ಅದಕ್ಕಾಗಿ ಬೇರೆಬೇರೆ ರೀತಿಯ ನಿದರ್ಶನಗಳನ್ನು ಬಳಸುವುದು ಅಗತ್ಯ.

	ವಿಜ್ಞಾನ ಪಾಠಬೋಧನೆಯಲ್ಲಿ ಶಾಬ್ದಿಕ ನಿದರ್ಶನಗಳನ್ನು ಬಳಸಿದರೂ ವಾಸ್ತವಿಕ ನಿದರ್ಶನಗಳು ಹೆಚ್ಚು ಉಪಯುಕ್ತವೆನಿಸುತ್ತವೆ. ಮೀನಿನ ಪಾಠವನ್ನು ಮಾಡುವಾಗ ನಿಜವಾದ ಸಜೀವ ಮೀನೊಂದನ್ನು ತಂದು ಅದರ ಅಂಗರಚನೆ, ಚಲನೆ, ಉಸಿರಾಟ ಮುಂತಾದ ಕ್ರಿಯೆಗಳನ್ನು ನಿದರ್ಶಿಸಿ ಪಾಠಮಾಡಿದರೆ ವಿಷಯ ಆಕರ್ಷಕವಾಗಿದ್ದು ಬೋಧನೆಯೂ ಕಲಿವೂ ಯಶಸ್ವಿಯಾಗುತ್ತದೆ. ನಿಜವಾದ ಮೀನು ಸಿಕ್ಕದಿದ್ದಾಗ ಆಲ್ಕೊಹಾಲಿನಲ್ಲಿ ರಕ್ಷಿಸಿಟ್ಟ ಮೀನನ್ನೊ ಒಣಮೀನನ್ನೊ ಬಳಸಬಹುದು. ಅದೂ ಇಲ್ಲದಾಗ ಮೀನಿನ ಮಾದರಿಯನ್ನೊ ಚಿತ್ರ ಅಥವಾ ನಕ್ಷೆಯನ್ನೊ ಬಳಸಬಹುದು. ಸಜೀವ ಮೀನು ಅತ್ಯಂತ ಪರಿಣಾಮಕಾರಿಯಾದ ನಿದರ್ಶನವಾದರೆ ಇತರ ವಾಸ್ತವಿಕ ನಿದರ್ಶನಗಳು ಅನುಕ್ರಮವಾಗಿ ಕಡಿಮೆ ಪರಿಣಾಮಕಾರಿಯಾಗತಕ್ಕವು. ಎಲ್ಲಕ್ಕಿಂತ ಕಡಿಮೆ ಪರಿಣಾಮದ್ದು ಅದರ ಶಾಬ್ದಿಕ ವರ್ಣನೆ.

	ವಿಜ್ಞಾನ ಪಾಠಮಾಡುವಾಗ ಪ್ರಯೋಗ ಪ್ರದರ್ಶನಗಳಿಗಾಗಿ ಬಗೆಬಗೆಯ ವಾಸ್ತವಿಕ ನಿದರ್ಶನಗಳನ್ನು ಬಳಸುವುದುಂಟು. ಹಾಗೆ ನಿದರ್ಶನಗಳನ್ನು ಸಂಗ್ರಹಿಸುವಾಗ ಅವು ಅಗ್ಗವಾಗಿದ್ದು ಹೆಚ್ಚುಕಾಲ ಬಾಳತಕ್ಕವಾಗಿರಬೇಕು; ಹಾಗೂ ಸುಲಭವಾಗಿ ಪಾಠಕಾಲದಲ್ಲಿ ಬಳಸಲು ಬರತಕ್ಕವಾಗಿರಬೇಕು. ಸಾಧ್ಯವಾದೆಡೆಗಳಲ್ಲಿ ಅಧ್ಯಾಪಕರು ಅಥವಾ ವಿದ್ಯಾರ್ಥಿಗಳು ತಾವೇ ನಿರ್ಮಿಸಿಕೊಂಡ ಅಥವಾ ಸಂಗ್ರಹಿಸಿ ತಂದ ನಿದರ್ಶನಗಳನ್ನು ಬಳಸುವುದಾದರೆ ಒಳ್ಳೆಯದು.

	ನಿದರ್ಶನಗಳ ಬಳಕೆಯಲ್ಲಿ ಎಚ್ಚರಿಕೆ: ಪಾಠಬೋಧನೆಗೆ ನಿದರ್ಶನಗಳನ್ನು ಎಷ್ಟು ಜಾಣ್ಮೆಯಿಂದ ಆರಿಸಬೇಕೊ ತರಗತಿಯಲ್ಲಿ ಅವನ್ನು ಅಷ್ಟೇ ಎಚ್ಚರಿಕೆಯಿಂದ ಬಳಸಬೇಕು. ಇಲ್ಲವಾದರೆ ಅವುಗಳ ಉದ್ದೇಶ ಈಡೇರಲಾರದು. ಅಷ್ಟೇ ಅಲ್ಲ, ಅಸಡ್ಡೆಯಿಂದ ಬಳಸಿದಾಗ ಅನುಕೂಲಕ್ಕಿಂತ ಅನಾನುಕೂಲವೇ ಆಗಬಹುದು. ಯಾವ ನಿದರ್ಶನವೇ ಆಗಲಿ ಅದನ್ನು ಬಳಸುವುದು ಅದಕ್ಕಾಗಿಯೇ ಅಲ್ಲ-ಉದ್ದೇಶಿಸಿರುವ ಪಾಠವಿಷಯವನ್ನು ಸ್ಪಷ್ಟಪಡಿಸುವುದಕ್ಕೆ. ಆದ್ದರಿಂದ ಅದು ಎಷ್ಟೇ ಆಕರ್ಷಕವಾಗಿರಲಿ ಮುಖ್ಯ ವಿಷಯವನ್ನು ಹಿಂಬದಿಗೆ ತಳ್ಳುವಷ್ಟು ಪ್ರಾಧಾನ್ಯ ಪಡೆಯಬಾರದು. ಕಥೆಯೊಂದನ್ನು ನಿದರ್ಶನವಾಗಿ ಬಳಸುವಾಗ ಅದು ಅತಿಯಾಗಿ ಕಾಲವನ್ನು ಆಕ್ರಮಿಸಬಾರದು. ಇಲ್ಲವಾದರೆ ಮಕ್ಕಳ ಮನಸ್ಸು ಮುಖ್ಯವಿಷಯದಿಂದ ಕಥೆಯ ಕಡೆ ತಿರುಗೀತು. ನಿಜವಾದ ವಸ್ತು, ಮಾದರಿ ಮುಂತಾದ ನಿದರ್ಶನಗಳನ್ನು ಬಳಸುವಾಗ ಅವನ್ನು ಒಂದು ತಟ್ಟೆಯಲ್ಲಿಟ್ಟು ಮೇಜಿನ ಹಿಂಭಾಗದಲ್ಲಿ ತರಗತಿಗೆ ಕಾಣದಂತೆ ಇಟ್ಟಿದ್ದು ಸೂಕ್ತಸಮಯದಲ್ಲಿ ಅದನ್ನು ಎಲ್ಲರಿಗೂ ಚೆನ್ನಾಗಿ ಕಾಣುವಂತೆ ಮೇಜಿನ ಮೇಲಿರಿಸಿ ಪ್ರದರ್ಶಿಸಬೇಕು. ಬಹುಸೂಕ್ಷ್ಮ ಪ್ರಾಣಿ, ಜೀವಿಯ ಅಂಗ, ಶಿಲೆ, ಹರಳು ಮುಂತಾದವುಗಳೆಂದರೆ ಸೂಕ್ಷ್ಮದರ್ಶಕದ ಕೆಳಗಿಟ್ಟು ಪ್ರತಿಯೊಬ್ಬರೂ ಬಂದು ನೋಡಲು ಅವಕಾಶ ಕಲ್ಪಿಸಬೇಕು. ತರಗತಿಯಲ್ಲಿ ವಿದ್ಯಾರ್ಥಿಗಳ ಬಳಿಗೆ ನಿದರ್ಶನಗಳನ್ನು ಕೊಂಡುಹೋಗಿ ತೋರಿಸಿ ಸ್ಪಷ್ಟಪಡಿಸಬಹುದು. ಪ್ರದರ್ಶಿಸಿದ ಅನಂತರ ಅದನ್ನು ಮೇಜಿನ ಮೇಲೆ ಇರಿಸಬಾರದು. ದೀರ್ಘಕಾಲ ಅಧ್ಯಾಪಕರು ಕೈಯಲ್ಲಿ ಹಿಡಿದುಕೊಂಡೇ ಇರಲೂಬಾರದು; ಅದರಿಂದ ವಿದ್ಯಾರ್ಥಿಗಳು ಆ ಕಡೆಯೇ ನೋಡುತ್ತ ಮುಖ್ಯವಿಷಯವನ್ನು ನಿರ್ಲಕ್ಷಿಸಬಹುದು. ಆದ್ದರಿಂದ ಅದನ್ನು ಬಳಸಿದ ಅನಂತರ ಮರೆಯಲ್ಲಿ ಇರಿಸಬೇಕು. ಚಿತ್ರ, ನಕ್ಷೆ, ಭೂಪಟಗಳನ್ನು ಬಳಸಬೇಕಾದಾಗ ಮೊದಲಿಂದ ಕೊನೆಯವರೆಗೂ ತರಗತಿಯಲ್ಲಿ ತಗುಲಿ ಹಾಕಿರುವುದರ ಬದಲು ಅಗತ್ಯವಾದಾಗ ತಂದು ತಗುಲಿಹಾಕಿ ಅನಂತರ ತೆಗೆದುಬಿಡಬೇಕು. ಕಪ್ಪು ಹಲಗೆಯ ಮೇಲೆ ಬರೆಯುವ ಚಿತ್ರಗಳ ವಿಷಯದಲ್ಲೂ ಅಷ್ಟೆ. ಅಗತ್ಯವಾದಾಗ ಅವನ್ನು ಬರೆದು ಅಗತ್ಯ ಮುಗಿದ ಮೇಲೆ ಅಳಿಸಿಬಿಡುವುದು ಉತ್ತಮ. ವಿಜ್ಞಾನ, ಭೂವಿವರಣೆ ಮುಂತಾದ ಪಾಠವಿಷಯಗಳನ್ನು ಮಾಡುವಾಗ ಕಪ್ಪುಹಲಗೆಯ ಮೇಲೆ ರೇಖಾಚಿತ್ರಗಳನ್ನು ಬರೆಯುವುದು ಒಳ್ಳೆಯದು ಅನಗತ್ಯವಾಗಿ ಬಣ್ಣಗಳನ್ನು ಬಳಸಿ ಅಲಂಕರಿಸುತ್ತ ಕೂಡಬಾರದು.

	ಭೂವಿವರಣೆಯ ಪಾಠಮಾಡುವಾಗ ಬರೀ ನಕ್ಷೆಯ ಭೂಪಟವನ್ನು ತೂಗುಹಾಕಿ ಅಗತ್ಯವಾದಂತೆ ಅದರಲ್ಲಿ ಸೀಮೆಸುಣ್ಣದಿಂದ ನದಿ, ಬೆಟ್ಟ, ಮುಖ್ಯಪಟ್ಟಣ, ಪ್ರಾದೇಶಿಕ ಮತ್ತು ರಾಜಕೀಯ ವಿಭಾಗಗಳು, ಮಳೆಬೆಳೆಗಳು, ಜನಸಂಖ್ಯೆ ಮುಂತಾದವನ್ನು ಯುಕ್ತ ಸಂಕೇತಗಳ ಮೂಲಕ ಗುರುತಿಸಬಹುದು. ಜೀವವಿಜ್ಞಾನದಲ್ಲಿ ಅಂಗರಚನೆಯ ಪಾಠಮಾಡುವಾಗಲೂ ಈ ನೀತಿಯನ್ನು ಅನುಸರಿಸಬಹುದು. ಕಪ್ಪು ಹಲಗೆಯ ಮೇಲೆ ಸಂಕೀರ್ಣ ಚಿತ್ರ ಅಥವಾ ನಕ್ಷೆಯನ್ನು ಬರೆಯುವಾಗ ಪಾಠ ಮುಂದುವರಿದಂತೆ ಸಂಬಂಧಿಸಿದ ಅದರ ಭಾಗಗಳನ್ನು ಬರೆಯುತ್ತ ಹೋಗಬೇಕು. ಪಾಠದ ಆರಂಭದಲ್ಲಿ ಇಡೀ ಚಿತ್ರವನ್ನು ಬರೆದಿಟ್ಟು ಅದನ್ನು ಅಗತ್ಯವಾದಂತೆ ನಿದರ್ಶಿಸುತ್ತ ಹೋಗುವುದು ಯುಕ್ತವಲ್ಲ.
(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ